ಆರ್ನಲ್ಡ್, ಸರ್ ಎಡ್ವಿನ್ (1832-1904). 

ದ ಲೈಟ್ ಆಫ್ ಏಷ್ಯ ಆರ್ ದಿ ಗ್ರೇಟ್ ರಿನನ್ಸಿಯೇಷನ್ ಎಂಬ (1870) ಬುದ್ಧಜೀವನವನ್ನು ಕುರಿತ ಖ್ಯಾತ ಕವನದ ಕರ್ತೃ. ಇಂಗ್ಲೆಂಡಿನ ಸಸೆಕ್ಸ್‍ನಲ್ಲಿನ ಒಬ್ಬ ಮ್ಯಾಜಿಸ್ಟ್ರೇಟನ ಮಗ. ಲಂಡನ್, ಆಕ್ಸ್‍ಫರ್ಡ್‍ಗಳಲ್ಲಿ ಓದಿ, ಪೂನಾದ ಡೆಕನ್ ಕಾಲೇಜಿನಲ್ಲಿ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿದ (1856-61). 				
(ಎನ್.ಎಸ್.ಎಲ್.)

ಸರ್ ಎಡ್ವಿನ್ 1861ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿ ಡೆಯ್ಲಿ ಟೆಲಿಗ್ರಾಫ್ ಪತ್ರಿಕೆಯ ಸಂಪಾದಕ ಮಂಡಲಿಯನ್ನು ಸೇರಿದ. ಮುಂದೆ ಅದರ ಸಂಪಾದಕನಾದ. ಪೂರ್ವ ಜಗತ್ತಿನ ಬದುಕಿನ ರೀತಿ ಮತ್ತು ಚಿಂತನೆಗಳನ್ನು ಪಶ್ಚಿಮ ಜಗತ್ತಿಗೆ ಪರಿಚಯ ಮಾಡಿಕೊಡುವುದು ಇವನ ಗುರಿ. ಇದಕ್ಕಾಗಿ ಕೇಂದ್ರ ವ್ಯಕ್ತಿಯಾದ. ದ ಲೈಟ್ ಆಫ್ ಏಷ್ಯ ಎನ್ನುವ ದೀರ್ಘ ಕವನವನ್ನು ಬರೆದ. ಇವನ ಇತರ ಕೃತಿಗಳು ದ ಸಾಂಗ್ ಆಫ್ ಸಾಂಗ್ಸ್ ಆಫ್ ಇಂಡಿಯ, ವಿತ್ ಸಾದಿ ಇನ್ ದ ಗಾರ್ಡನ್, ಮತ್ತು ದಿ ಟೆನ್ತ್ ಮ್ಯಾನ್.

ಸರ್ ಎಡ್ವಿನ್ನನ ದ ಲೈಟ್ ಆಫ್ ಏಷ್ಯ ಬಹು ಜನಪ್ರಿಯವಾಯಿತು. ಪಾಶ್ಚಾತ್ಯ ಜಗತ್ತಿಗೆ ಬುದ್ಧನ ಜೀವನ ಮತ್ತು ಉಪದೇಶವನ್ನು ಸರಳವಾದ ಭಾಷೆಯಲ್ಲಿ ಮೂರ್ತವಾದ ಪ್ರಸಂಗಗಳಿಗೆ ಪ್ರಾಧಾನ್ಯ ನೀಡಿ ಪರಿಚಯ ಮಾಡಿಕೊಟ್ಟಿತು. ಭಾರತದಲ್ಲಿ ಇಂಗ್ಲಿಷ್ ಬಲ್ಲವರೂ ಈ ಕವನವನ್ನು ಮೆಚ್ಚಿಕೊಂಡರು. ದ ಲೈಟ್ ಆಫ್ ದಿ ವಲ್ರ್ಡ್ ಎನ್ನುವ ದೀರ್ಘ ಕವನದಲ್ಲಿ ಯೇಸು ಕ್ರಿಸ್ತನ ಬದುಕನ್ನು, ಉಪದೇಶವನ್ನು ನಿರೂಪಿಸಲು ಪ್ರಯತ್ನಪಟ್ಟ, ಆದರೆ ಈ ರಚನೆಯು ದ ಲೈಟ್ ಆಫ್ ಏಷ್ಯ ದಷ್ಟು ಯಶಸ್ವಿಯಾಗಲಿಲ್ಲ. 

							
(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ